ಕೋನೋ, ಸ್ಟೆನ್
1867-1948. ಭಾರತದ ಭಾಷೆಗಳ ಬಗ್ಗೆ ಕೆಲಸ ಮಾಡಿದ ಪಾಶ್ಚಾತ್ಯ ವಿದ್ವಾಂಸರಲ್ಲಿ ಅಗ್ರಪಂಕ್ತಿಗೆ ಸೇರಿದ ಈತ ಹುಟ್ಟಿನಿಂದ ನಾರ್ವೆಯವ. ತಂದೆ ಅಲ್ಲಿಯ ಧರ್ಮೋಪದೇಶಕನಾಗಿದ್ದ. ಪುರಾತನ ಗ್ರೀಕ್ ಮತ್ತು ರೋಮನ್ ಸಾಹಿತ್ಯಗಳೊಂದಿಗೆ ಜರ್ಮನ್ ಭಾಷಾವಿಜ್ಞಾನವನ್ನೂ ಅಭ್ಯಾಸ ಮಾಡಿ 1891ರಲ್ಲಿ ಡಿಗ್ರಿ ಪಡೆದ ಕೋನೋ ಆಗಿನ ಕಾಲಕ್ಕೆ ಪ್ರಾಕೃತ ಭಾಷೆಗಳ ಬಗ್ಗೆ ವಿಶೇಷ ಜ್ಞಾನ ಪಡೆದಿದ್ದ ಪಿಶೆಲನ ಬಳಿ ಸ್ವಲ್ಪ ಕಾಲ ಶಿಷ್ಯನಾಗಿದ್ದು 1893ರಲ್ಲಿ ಡಾಕ್ಟರೇಟ್ ಪದವೀಧರನಾದ. ಕೆಲವೇ ಕಾಲದೊಳಗೆ ಇಂಡೋ ಯೂರೋಪಿಯನ್ ಭಾಷೆಗಳ ತೌಲನಿಕ ಅಧ್ಯಯನದಲ್ಲೂ ಪುರಾತತ್ವಶಾಸ್ತ್ರದಲ್ಲೂ ನಿಷ್ಣಾತನೆನಿಸಿಕೊಂಡ. 1894 ರಿಂದ 1896ರ ವರೆಗೆ ಬರ್ಲಿನ್ ನಗರದ ರಾಜಗ್ರಂಥಾಲಯದ ಉಪಗ್ರಂಥಪಾಲಕನಾಗಿ ಕೆಲಸ ಮಾಡಿ ಅನಂತರ ಮುಂದಿನ ಮೂರು ವರ್ಷಗಳ ಕಾಲ (1896-1899) ಕ್ರಿಸ್ಟಿಯಾನಿಯ ಎಂಬಲ್ಲಿ ಮೊದಲು ಅಧ್ಯಾಪಕನಾಗಿಯೂ ಕಡೆಯಲ್ಲಿ ಉಪಪ್ರಾಧ್ಯಾಪಕನಾಗಿಯೂ ಇದ್ದ. 1900ರ ಸುಮಾರಿಗೆ ಭಾರತಕ್ಕೆ ಬಂದು ಏಳು ವರ್ಷಗಳ ಕಾಲ ಕೆಲಸ ಮಾಡಿದ. ಸರ್ ಜಾರ್ಜ್ ಗ್ರಿಯರ್‍ಸನ್ ಪ್ರಾರಂಭಿಸಿದ್ದ 19 ಸಂಪುಟಗಳ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯ ಕಾರ್ಯದಲ್ಲಿ 1900ರಿಂದ ಮೂರು ವರ್ಷಗಳ ಕಾಲ ಸಹಾಯಕನಾಗಿದ್ದು, ದ್ರಾವಿಡ, ಮುಂಡ ಮತ್ತು ಚೀನೀ ಭಾಷಾಪರಿವಾರಗಳಿಗೆ ಸಂಬಂಧಿಸಿದಂತೆ 5 ಸಂಪುಟಗಳನ್ನು ಸಿದ್ಧಗೊಳಿಸಿದ. 1904ರಲ್ಲಿ ಸರ್ಕಾರದ ಶಾಸನ ಇಲಾಖೆಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡ. ಈ ಸ್ಥಾನದಲ್ಲಿದ್ದಾಗ ಸಂಸ್ಕøತ ಮತ್ತು ಪ್ರಾಕೃತ ಭಾಷೆಗಳಲ್ಲಿ ದೊರೆತ ಅನೇಕ ಶಾಸನಗಳ ಸಂಪಾದನ ಕಾರ್ಯವನ್ನು ನಿರ್ವಹಿಸಿದುದಲ್ಲದೆ, 1906-7ರಲ್ಲಿ ಸರ್ ಜಾನ್ ಮಾರ್ಷಲನ ನೇತೃತ್ವದಲ್ಲಿ, ಕಾಶಿಗೆ ಸಮೀಪದಲ್ಲಿರುವ ಸಾರಾನಾಥದ ಬಳಿ ನಡೆದ ಉತ್ಖನನ ಕೆಲಸದಲ್ಲಿ ಕೂಡ ಭಾಗವಹಿಸಿದ. ಭಾರತದಲ್ಲಿದ್ದಷ್ಟು ಕಾಲವೂ ಇಲ್ಲಿಯ ಭಾಷೆಗಳ ಅಧ್ಯಯನದಲ್ಲಿ ನಿರತನಾಗಿದ್ದ. ಎಪಿಗ್ರಾಫಿಯ ಇಂಡಿಕದ ಸಂಪಾದಕನಾಗಿ 12ನೆಯ ಸಂಪುಟದ ಎಲ್ಲ ಸಂಚಿಕೆಗಳನ್ನೂ 10, 11, 13ನೆಯ ಸಂಪುಟಗಳ ಕೆಲವು ಸಂಚಿಕೆಗಳನ್ನೂ ಪ್ರಕಟಿಸಿದ. 1907ರಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತನಾಗಿ, ಸ್ವದೇಶಕ್ಕೆ ಹಿಂದಿರುಗಿ ಆಸ್ಲೋ ನಗರದ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ಮತ್ತಿತರ ಭಾರತೀಯ ಭಾಷೆಗಳ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಈತನ ಅನೇಕ ಪ್ರೌಢ ಲೇಖನಗಳು ಎಪಿಗ್ರಾಫಿಯ ಇಂಡಿಕದಲ್ಲಿ ಪ್ರಚುರಗೊಂಡಿವೆ. ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ 5 ವರ್ಷಗಳ ಕಾಲ (1914-19) ಮತ್ತು ರವೀಂದ್ರನಾಥ ಠಾಕೂರರು ಸ್ಥಾಪಿಸಿದ ಶಾಂತಿನಿಕೇತನದಲ್ಲಿ ಒಂದು ವರ್ಷಕಾಲ (1924-25) ಪ್ರಾಧ್ಯಾಪಕನಾಗಿದ್ದ ಸಮಯವನ್ನು ಬಿಟ್ಟರೆ, 1948ರ ಜೂನ್ 29ರಂದು ಅಸುನೀಗುವವರೆಗೂ ಸ್ಟೆನ್ ಕೋನೋ ಆಸ್ಲೋ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ. 1929ರಲ್ಲಿ ಕಾರ್ಪಸ್ ಇನ್‍ಸ್ಕ್ರಿಪ್ಷನಮ್ ಇಂಡಿಕ್ಯಾರಮ್‍ನ ಎರಡನೆಯ ಸಂಪುಟದ ಮೊದಲನೆಯ ಭಾಗವಾಗಿ ಪ್ರಕಾಶಿತವಾದ ಖರೋಷ್ಠೀ ಶಾಸನಗಳು ಕೋನೋನ ಅತಿ ಮುಖ್ಯ ಗ್ರಂಥ. ಇದಲ್ಲದೆ ಸಕ ಭಾಷೆಯಲ್ಲಿ ವಿಶೇಷ ಜ್ಞಾನ ಪಡೆದಿದ್ದ ಕೋನೋ 1932ರಲ್ಲಿಯೇ ಈ ಭಾಷೆಯನ್ನು ಕುರಿತಾದ ಸಕ ಸ್ಟಡೀಸ್ ಎಂಬ ಒಂದು ಗ್ರಂಥವನ್ನು ಪ್ರಕಾಶಗೊಳಿಸಿದ. ಈತನ ಅಮೋಘವಾದ ಸಾರಸ್ವತ ಸೇವೆಯನ್ನು ಗಮನಿಸಿದ ಜರ್ಮನ್ ಓರಿಯಂಟಲ್ ಸೊಸೈಟಿ, ಬರ್ಲಿನ್ ಅಕೆಡಮಿ, ಮತ್ತು ಐರ್ಲೆಂಡಿನ ರಾಯಲ್ ಏಷ್ಯಾಟಿಕ್ ಸೊಸೈಟಿ ಮತ್ತು ಪ್ಯಾರಿಸಿನ ಏಷ್ಯಾಟಿಕ್ ಸೊಸೈಟಿಗಳು ತಮ್ಮ ಗೌರವ ಸದಸ್ಯತ್ವವನ್ನು ಕೊಟ್ಟು ಈತನನ್ನು ಗೌರವಿಸಿದುವು. ಖೊಟನೀಸ್ ಸಕ ಭಾಷೆಯ ರೀಡರೊಂದನ್ನು ಸಿದ್ಧಗೊಳಿಸಿದನಾದರೂ ಅದರ ಪ್ರಕಟಣೆಯನ್ನೀತ ನೋಡಲಿಲ್ಲ. ನಾರ್ವೇ ದೇಶದವನೇ ಆದ ಜಾರ್ಜ್ ಮೊರ್ಗನ್ ಸ್ಟಿಯರ್ನ್ ಈ ಗ್ರಂಥವನ್ನು ಕೋನೋನ ಮರಣಾನಂತರ ಪ್ರಕಟಿಸಿದ. ಆಕ್ಟ ಓರಿಯಂಟ್ಯಾಲಿಯ ಪತ್ರಿಕೆಯ ಸಂಪಾದಕನಾಗಿದ್ದು ತನ್ಮೂಲಕ ಭಿನ್ನ ರಾಷ್ಟ್ರೀಯರಾದ ಪ್ರಾಚ್ಯವಿದ್ಯಾತಜ್ಞರ ನಡುವೆ ಸೌಹಾರ್ದ ಮೈತ್ರಿ ಬೆಳೆಯಲು ಕೋನೋ ಬಹಳವಾಗಿ ಶ್ರಮಿಸಿದನೆಂಬ ವಿಷಯ ಗಮನಾರ್ಹವಾದುದು.
										(ಎಂ.ಎನ್.ಕೆ.; ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ